ಫೋರ್ಸ್‍ಮನ್, ವರ್ನರ್
1904. ಕ್ಯಥೀಟರೈಸೇಶನ್, ಅಂದರೆ ರಕ್ತನಾಳದ ಮೂಲಕ ನಳಿಕೆ ತೂರುವ ಕ್ರಿಯೆ, ಎಂಬ ವೈದ್ಯಕೀಯ ತಂತ್ರವನ್ನು ಶೋಧಿಸಿದ ಜರ್ಮನ್ ಶಸ್ತ್ರ ವೈದ್ಯ. ರಕ್ತನಾಳಗಳ ಪೈಕಿ ಅಪಧಮನಿಯಲ್ಲಿ ರಕ್ತಪ್ರವಾಹ ರಭಸವಾಗಿರುವುದರಿಂದ ಅದು ಈ ಪ್ರಯೋಗಕ್ಕೆ ಹೇಳಿದ್ದಲ್ಲ. ಹೀಗೆ ತರ್ಕಿಸಿದ ಫೋರ್ಸ್‍ಮನ್ ತನ್ನ ಬಲತೋಳಿನ ಅಭಿಧಮನಿ ಕತ್ತರಿಸಿ ಅದರೊಳಕ್ಕೆ ಕ್ಯಥೀಟರನ್ನು (ತೂರುನಳಿಕೆ) ಕ್ರಮ ಕ್ರಮವಾಗಿ ತೂರುತ್ತ ಆ ದೇಹಭಾಗವನ್ನು ಎಕ್ಸ್‍ಕಿರಣ ಪಟಲದ ಮೇಲೆ ಬಿಂಬಿಸುವಂತೆ ಏರ್ಪಡಿಸಿ ಅದರಲ್ಲಿ ತೂರುನಳಿಕೆಯ ಪ್ರಗತಿ ಗಮನಿಸತೊಡಗಿದ (1929). ಈ ಪ್ರಯೋಗದಲ್ಲಿ ತೂರುನಳಿಕೆಯ ಇನ್ನೊಂದು ಕೊನೆ ಗುಂಡಿಗೆಯ ಬಲ ಹೃತ್ಕುಕ್ಷಿಯನ್ನೇ ಸ್ಪರ್ಶಿಸಿದ್ದು ಮಾತ್ರವಲ್ಲ ಅದರಲ್ಲಿ ತೂತವನ್ನೇ ಮಾಡಿತ್ತೆಂದು ಎಕ್ಸ್‍ಕಿರಣ ಚಿತ್ರಗಳಿಂದ ವೇದ್ಯವಾಯಿತು. ಈ ಪ್ರಯೋಗ ನಡೆಸಿದ ಕೆಲವು ಕಾಲಾನಂತರ ಕ್ಯಥೀಟರ್ ಮೂಲಕ ವಿಕಿರಣ ವಸ್ತುವನ್ನು ಚುಚ್ಚಿಬಿಟ್ಟರೆ, ಗುಂಡಿಗೆಯ ಕಾರ್ಯವಿಧಾನವನ್ನು ಸೂಚಿಸುವ ಸ್ಪಷ್ಟ ಎಕ್ಸ್‍ಕಿರಣ ಚಿತ್ರಗಳನ್ನು ತೆಗೆಯಲು ಸಾಧ್ಯವೆಂದು ಒಂದು ಲೇಖನದಲ್ಲಿ ಪ್ರಕಟಿಸಿದ. ಈ ಯುಗಪ್ರವರ್ತಕ ಸಂಶೋಧನೆಗಳನ್ನು ಸ್ವತಃ ಇವನ ಸಂಗಾತಿಗಳೇ ನಂಬಲಿಲ್ಲ. ಗೆಳೆಯರಂತೂ ಅಂಥ ಮಹಾ ಅಪಾಯಕಾರಿ ಯತ್ನಗಳಲ್ಲಿ ದುಡುಕಿ ಕೈಹಾಕದಿರುವಂತೆ ಒತ್ತಾಯಿಸಿದರು. ಇಷ್ಟಾದರೂ ಸಂಶೋಧನೆಯ ಕಷ್ಟ ತೊಂದರೆಗಳಿಂದಾಗಿ ಈ ದಿಸೆಯಲ್ಲಿ ಬಹುಕಾಲ ಏನೂ ಪ್ರಗತಿಯಾಗಲಿಲ್ಲ. ಮುಂದಿನ ವರ್ಷಗಳಲ್ಲಿ ಈತ ಡ್ರೆಸ್‍ಡನ್ನಿನ ಆಸ್ಪತ್ರೆಯಲ್ಲಿ ಮುಖ್ಯ ಶಸ್ತ್ರವೈದ್ಯನಾಗಿದ್ದ. ಎರಡನೆಯ ಮಹಾಯುದ್ಧದ ಕಾಲದಲ್ಲಿ ಅಮೆರಿಕ ಸೈನ್ಯಕ್ಕೆ ಕೈದಿಯಾಗಿ ಸಿಕ್ಕಿಬಿದ್ದು ಬಂದಿಗಳ ಶಿಬಿರದಲ್ಲಿದ್ದ. ಯುದ್ಧ ನಿಲ್ಲುವ ಹೊತ್ತಿಗೆ ಪಶ್ಚಿಮ ಜರ್ಮನಿಯಲ್ಲಿ ಸಾಮಾನ್ಯ ವೈದ್ಯವೃತ್ತಿಗಾರನಾಗಿದ್ದ. ಫೋರ್ಸ್‍ಮನ್ನನನ್ನು ಡುಸೆಲ್‍ಡಾರ್ಫಿನ ಧರ್ಮೋಪದೇಶಿಗಳ ಆಸ್ಪತ್ರೆಯಲ್ಲಿ ಮೂತ್ರರೋಗ ಶಾಖೆಯ ಮುಖ್ಯ ಶಸ್ತ್ರವೈದ್ಯನಾಗಿ ನೇಮಿಸಿಕೊಂಡರು (1957). ಆದರೆ ಆರು ತಿಂಗಳೊಳಗಾಗಿ ಆಸ್ಪತ್ರೆಯ ಆಡಳಿತಗಾರರು ಇವನನ್ನು ಹುದ್ದೆಯಿಂದ ನಿವೃತ್ತನಾಗಲು ಎಚ್ಚರಿಕೆಕೊಟ್ಟರು. 1951ರಲ್ಲಿ ಗುಂಡಿಗೆಯ ಸಂಶೋಧನೆಯಲ್ಲಿ ಮೊದಲಿಗನೆಂದು ಗೌರವಾನ್ವಿತನಾದ. ಮೂರು ವರ್ಷಗಳ ಬಳಿಕ ಪಂಡಿತ ಸಂಘಗಳ ಲೈಫ್‍ನಿಟ್ಸ್ ಪದಕ ದೊರೆಯಿತು. ಇವನ ಕ್ಯಥೀಟರ್ ವಿಧಾನದ ಮೇಲಿನ ಬರೆಹವನ್ನು (1930) ಓದಿ, ಇನ್ನಷ್ಟು ತನಿಖೆಗಳಿಂದ ಅದನ್ನು ರೋಗಿಗಳಲ್ಲಿ ಪ್ರಯೋಗಿಸಲು ಸಾಧ್ಯವೆಂದು ತೋರಿಸಿಕೊಟ್ಟ ಡಿಕ್ಸನ್, ರಿಚರ್ಡ್‍ಸನ್ ಆಂಡ್ರಿ ಎಫ್. ಕೌರ್ನಾಂಡ್ ಇವರೊಂದಿಗೆ 1956ರಲ್ಲಿ ಪೋರ್ಸ್‍ಮನ್ನನಿಗೆ ನೊಬೆಲ್ ಬಹುಮಾನ ದೊರೆಯಿತು. (ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ)
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ